Chief Editor
Manohar. R (Manu)
Photo Journalist
chitrataramanu@gmail.com
+91 9845549026
54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ರೆಡ್‍ ಕಾರ್ಪೆಟ್‍ ಗಾಲಾ ಪ್ರೀಮಿಯರ್ ಗೆ `ಗ್ರೇ ಗೇಮ್ಸ್`ಚಿತ್ರ ಆಯ್ಕೆ
Posted date: 23 Thu, Nov 2023 08:14:13 AM
ಗೋವಾ ಸರ್ಕಾರ, ಎಂಟರ್ ಟೈನ್‍ಮೆಂಟ್‍ ಸೊಸೈಟಿ ಆಫ್‍ ಗೋವಾ ಮತ್ತು ಎನ್‍.ಎಫ್‍.ಡಿ.ಸಿ ಇಂಡಿಯಾ ಜಂಟಿಯಾಗಿ ಗೋವಾದ ಪಣಜಿಯಲ್ಲಿ ಆಯೋಜಿಸಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFI) ಕನ್ನಡದ `ದಿ ಗ್ರೇ ಗೇಮ್ಸ್` ಚಿತ್ರ ಆಯ್ಕೆಯಾಗಿದೆ. ವಿಜಯ್‍ ರಾಘವೇಂದ್ರ, ಭಾವನಾ ರಾವ್‍, ಶ್ರುತಿ ಪ್ರಕಾಶ್‍, ಅಪರ್ಣ ವಸ್ತಾರೆ, ಜೈ ಮುಂತಾದವರು ನಟಿಸಿರುವ ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ್‍ ನಿರ್ದೇಶನ ಮಾಡಿದ್ದಾರೆ.
 
ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ `ಗ್ರೇ ಗೇಮ್ಸ್` ಚಿತ್ರವು ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದ `ರೆಡ್‍ ಕಾರ್ಪೆಟ್‍ ಗಾಲ ಪ್ರೀಮಿಯರ್‍` ವಿಭಾಗದಡಿ ಮೊದಲ ಪ್ರದರ್ಶನ ಕಾಣುತ್ತಿದೆ. ಈ ವಿಭಾಗದಲ್ಲಿ ಭಾರತದ ಹಲವು ಚಿತ್ರಗಳು ಪ್ರೀಮಿಯರ್ ಆಗುತ್ತಿದ್ದು, ಈ ಪೈಕಿ ಕನ್ನಡದ `ದಿ ಗ್ರೇ ಗೇಮ್ಸ್` ಸಹ ಒಂದಾಗಿರುವುದು ವಿಶೇಷ.
 
ಮೆಟಾವರ್ಸ್ ಮತ್ತು ಆನ್‍ಲೈನ್‍ ಗೇಮಿಂಗ್‍ ವೈಷಮ್ಯದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್ ಪೊಲೀಸ್‍ ಅಧಿಕಾರಿಯಾಗಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್‍ ಈ ಚಿತ್ರದಲ್ಲಿ ಒಬ್ಬ ನಟಿಯಾಗಿ ಅಭಿನಯಿಸಿದ್ದು, ಈ ಚಿತ್ರದ ಮೂಲಕ ಜೈ(ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಸಹೋದರಿ ಪುತ್ರ) ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಲವು ರೋಚಕ ತಿರುವುಗಳಿರುವ ಈ ಚಿತ್ರ, ಅಷ್ಟೇ ಭಾವನಾತ್ಮಕವಾಗಿ ಮೂಡಿಬಂದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.
 
ಗೋವಾ ಚಿತ್ರೋತ್ಸವಕ್ಕೆ ಚಿತ್ರ ಆಯ್ಕೆಯಾಗಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ನಿರ್ದೇಶಕ ಗಂಗಾಧರ್ ಸಾಲಿಮಠ್‍, `ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಚಿತ್ರವಾಗಿದ್ದು, ವರ್ಚ್ಯುಯಲ್‍ ಮತ್ತು ನೈಜತೆ ನಡುವೆ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ದೃಷ್ಟಿಕೋನದ ಕುರಿತು ಸವಾಲು ಎಸೆಯುವಂತಿದೆ. ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಅವರ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಖಂಡಿತಾ ಇದೆ’ ಎನ್ನುತ್ತಾರೆ.
 
ತಮ್ಮ ಚಿತ್ರವನ್ನು ಗುರುತಿಸಿ, ಪ್ರೀಮಿಯರ್ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿರುವ ಚಿತ್ರೋತ್ಸವ ಸಮಿತಿಗೆ ಧನ್ಯವಾದ ಸಲ್ಲಿಸುವ ನಿರ್ಮಾಪಕ ಆನಂದ್ ಎಚ್‍. ಮುಗುದ್‍, `ಈ ಆಯ್ಕೆಯು ನಮ್ಮ ತಂಡದ ಶ್ರದ್ಧೆ ಮತ್ತು ಅವಿರತ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದ್ದು, ಅದನ್ನು ಗುರುತಿಸಿ ನಮ್ಮ ತಂಡಕ್ಕೆ ಇಂಥದ್ದೊಂದು ಅವಕಾಶ ಕಲ್ಪಿಸಿಕೊಟ್ಟ ಆಯ್ಕೆ ಸಮಿತಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಒಂದು ಅದ್ಭುತವಾದ ಅನುಭವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ` ಎಂದು ಹೇಳುತ್ತಾರೆ. 
 
`ಗ್ರೇ ಗೇಮ್ಸ್` ಚಿತ್ರಕ್ಕೆ ಸರೀಶ್‍ ಗ್ರಾಮಪುರೋಹಿತ್‍, ಅರವಿಂದ್‍ ಜೋಷಿ ಮತ್ತು ಡೋಲೇಶ್ವರ್ ರಾಜ್‍ ಸುಂಕು ಸಹ ನಿರ್ಮಾಪಕರಾಗಿದ್ದು, ಚಿತ್ರವು ಫೆಬ್ರವರಿ 2024ಕ್ಕೆ ಬಿಡುಗಡೆ ಆಗಲಿದೆ. ಚಿತ್ರಕ್ಕೆ ವರುಣ್‍ ಡಿ.ಕೆ ಅವರ ಛಾಯಾಗ್ರಹಣವಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ರೆಡ್‍ ಕಾರ್ಪೆಟ್‍ ಗಾಲಾ ಪ್ರೀಮಿಯರ್ ಗೆ `ಗ್ರೇ ಗೇಮ್ಸ್`ಚಿತ್ರ ಆಯ್ಕೆ - Chitratara.com
Copyright 2009 chitratara.com Reproduction is forbidden unless authorized. All rights reserved.